ಪ್ರವಾಸೋದ್ಯಮ - 	
	ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ, ಜನರನ್ನೂ ಜೀವನ ಪದ್ಧತಿಗಳನ್ನೂ ನಾಡನ್ನೂ ಸಂಸ್ಕøತಿ ನಾಗರಿಕತೆಗಳೇ ಮುಂತಾದವನ್ನೂ ಅರಿಯುವ ಉದ್ದೇಶದಿಂದ ಅಥವಾ ವಿಹಾರಾರ್ಥವಾಗಿ ದೇಶ ವಿದೇಶಗಳಲ್ಲಿ ಮಾಡುವ ವ್ಯವಸ್ಥಿತ ತಿರುಗಾಟ; ಈ ಸಂಚಾರಕ್ಕೆ ಸಂಬಂಧಿಸಿದ ವ್ಯವಸ್ಥೆ, ಕಲಾಪ (ಟೂರಿಸಮ್). ಜನರಲ್ಲಿ ಶಿಕ್ಷಣದ ಬೆಳವಣಿಗೆ, ಸ್ವಂತ ಮರ್ಜಿಯ ಮೇಲೆ ಖರ್ಚು ಮಾಡಬಹುದಾದಷ್ಟು ಮಟ್ಟಿಗೆ ವರಮಾನಗಳ ಹೆಚ್ಚಳ, ವಿರಾಮದ ವಿಸ್ತರಣೆ, ಸಂಬಳ ಸಹಿತ ರಜೆ ಮುಂತಾದವುಗಳಿಂದಾಗಿ ಈಚಿನ ವರ್ಷಗಳಲ್ಲಿ ಪ್ರವಾಸ ಬಹಳ ಹೆಚ್ಚಿದೆ. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೈಲಕ್ಕೆ ಪ್ರಥಮ ಸ್ಥಾನವಿದ್ದರೆ, ಎರಡನೆಯದಾಗಿ ಬರತಕ್ಕದ್ದು ಪ್ರವಾಸೋದ್ಯಮವೇ. ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಇದುವರೆಗಿನ ಬೆಳವಣಿಗೆ ಬಹುತೇಕ ಯಾದೃಚ್ಛಿಕವಾದ್ದು. ಇದರ ಬೆಳವಣಿಗೆಯ ಸಾಧ್ಯತೆಗಳು ಇನ್ನೂ ಅಗಾಧವಾಗಿವೆ. 1977ರಲ್ಲಿ ಪ್ರಪಂಚದಲ್ಲಿ ಶಸ್ತ್ರಾಸ್ತ್ರಗಳಿಗಾಗಿ ಒಟ್ಟು 30,000 ಕೋಟಿ ಡಾಲರುಗಳು ವೆಚ್ಚವಾದರೆ, ಪ್ರವಾಸಕ್ಕಾಗಿ 36,000 ಕೋಟಿ ಡಾಲರುಗಳು ವೆಚ್ಚವಾದವು.

	ಪ್ರಾಮುಖ್ಯ : ಯಾವುದೇ ದೇಶದ ಆರ್ಥಿಕತೆಯ ದೃಷ್ಟಿಯಿಂದ ಪ್ರವಾಸೋದ್ಯಮದ ಪ್ರಾಮುಖ್ಯ ಬಹಳ ಹೆಚ್ಚಿನದು. ಇದೊಂದು ಬಹುಮುಖ್ಯ ಆರ್ಥಿಕ ಕಲಾಪ. ಇದರಿಂದ ದೇಶಕ್ಕೆ ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ವಿಶೇಷ ಲಾಭವುಂಟು ವಿದೇಶಿ ಪ್ರವಾಸಿಗಳು ಒಂದು ದೇಶಕ್ಕೆ ಆಗಮಿಸುವುದರಿಂದ ವಿದೇಶಿ ವಿನಿಮಯ ಸಂಪಾದನೆಯಾಗುತ್ತದೆ. ಅವರು ಆ ದೇಶದ ನಾಣ್ಯದಲ್ಲಿ ಮಾಡುವ ಖರ್ಚುಗಳಿಗೆಲ್ಲ ತಮ್ಮ ದೇಶದ ಹಣವನ್ನು ಪ್ರತಿಯಾಗಿ ಕೊಡುತ್ತಾರೆ. ಪ್ರವಾಸೋದ್ಯಮದಿಂದ ದೇಶದ ವಿದೇಶೀ ವಿನಿಮಯ ಸಂಪಾದನೆಯ ಜೊತೆಗೆ ಜನರಲ್ಲಿ ಉದ್ಯೋಗಗಳ ನಿರ್ಮಾಣವಾಗುತ್ತದೆ. ವಿವಿಧಮುಖವಾಗಿ ಆರ್ಥಿಕತೆಯ ವಿಸ್ತರಣೆಗೆ ಇದರಿಂದ ನೆರವಾಗುತ್ತದೆ. ಪ್ರವಾಸೋದ್ಯಮ ಮೂಲತಃ ಒಂದು ಸೇವಾಕೈಗಾರಿಕೆ. ಇದು ಶ್ರಮಪ್ರದಾನವಾದ್ದು. ಭಾರತದಂಥ ದೇಶದಲ್ಲಿ-ಅಲ್ಪೋದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿರುವಾಗ ಪ್ರವಾಸೋದ್ಯಮದಿಂದ ಕುಶಲ ಹಾಗೂ ಅರೆಕುಶಲ ಕಾರ್ಮಿಕರಿಗೆ ಉದ್ಯೋಗ ದೊರಕುತ್ತದೆ.

	ಪ್ರವಾಸೋದ್ಯಮದಿಂದ ಸಾರಿಗೆ ಹಾಗೂ ಹೋಟೆಲ್ ಉದ್ಯಮಗಳಿಗೆ ವಿಶೇಷ ಲಾಭ ದೊರಕುತ್ತದೆ. ಈ ಎರಡೂ ವಲಯಗಳಲ್ಲಿ ಅನೇಕರಿಗೆ ಉದ್ಯೋಗ ಪ್ರಾಪ್ತವಾಗುತ್ತದೆ. ಪ್ರವಾಸಿಗಳಿಂದಾಗಿ ಅನೇಕ ಉತ್ಪನ್ನಗಳಿಗೆ ಬೇಡಿಕೆಯುಂಟಾಗುತ್ತದೆ. ಅನೇಕ ಗೃಹಕೈಗಾರಿಕೆಗಳಿಗೆ ಇದರಿಂದ ಚಾಲನೆ ದೊರೆಯುತ್ತದೆ. ಸ್ಥಳೀಯ ಕರಕುಶಲ ಕಸಬುಗಳೂ ಸಾಂಪ್ರದಾಯಿಕ ಕಲೆಗಳೂ ಅಳಿಯದೆ ಉಳಿದುಕೊಳ್ಳುತ್ತವೆ. ಸಾಮಾಜಿಕ ಗತಿಶೀಲತೆಗೆ ಇದರಿಂದ ಪ್ರೋತ್ಸಾಹ ದೊರಕುತ್ತದೆ. ಬೇಡಿಕೆಯ ಹೆಚ್ಚಳದಿಂದಾಗಿ ಸ್ಥಳೀಯ ಸರಕುಗಳು ಪೂರೈಕೆಯನ್ನು ಹೆಚ್ಚಸಬೇಕಾಗಿ ಬರುವುದರಿಂದ ಸುಧಾರಿತ ಉತ್ಪಾದನೆ ವಿಧಾನಗಳನ್ನು ಬಳಸಬೇಕಾಗಿ ಬರಬಹುದು. ಪ್ರವಾಸ ಮಾಡುವವರು ಸಾಮಾನ್ಯವಾಗಿ ಉನ್ನತ ಜೀವನಮಟ್ಟ ಇರುವವರಾದ್ದರಿಂದ ಅವರ ಜೀವನ ಮಟ್ಟಗಳಿಗೆ ಅನುಗುಣವಾದ ಸಾರಿಗೆ, ವಸತಿ, ಆಹಾರ, ಮನೋರಂಜನೆ ಮುಂತಾದವುಗಳನ್ನು ನೀಡುವುದಕ್ಕಾಗಿ ಆಧುನಿಕೀಕರಣ ಅಗತ್ಯವೆನಿಸುತ್ತದೆ. ಹೀಗಾಗಿ ಪ್ರವಾಸೋದ್ಯಮದಿಂದ ಆಧುನಿಕತೆಗೆ ಪ್ರೋತ್ಸಾಹ ದೊರಕುವುದಲ್ಲದೆ ಪ್ರಾದೇಶಿಕ ಅಸಮತೆಗಳು ಕಡಿಮೆಯಾಗುತ್ತದೆ. ವರಮಾನದ ಅಂತರಗಳೂ ಕುಗ್ಗುತ್ತವೆ. ವಿದೇಶಿ ವಿನಿಮಯ ಸಂಪಾದನೆಯ ಜೊತೆಗೆ ಸರಕಾರಕ್ಕೆ ತೆರಿಗೆಗಳೂ ಬರುತ್ತವೆ. ಪ್ರವಾಸಿಗಳು ಡಾಲರುಗಳನ್ನು ತರುವುದರ ಜೊತೆಗೆ ದೇಶವು ಸರಕು ಸೇವೆಗಳಿಗೆ ಅವರಿಂದ ಬೇಡಿಕೆ ಉಂಟಾಗುವುದರಿಂದ ಗುಣಕ ಪರಿಣಾಮವುಂಟಾಗಿ ಆರ್ಥಿಕತೆಗೆ ಹಲವು ಶ್ರೇಣಿಗಳಲ್ಲಿ ಉತ್ತೇಜನ ದೊರಕುತ್ತದೆ.

	ಸರಕಾರಗಳ ಆಸಕ್ತಿ: ರಾಷ್ಟ್ರೀಯ ಆರ್ಥಿಕತೆಗೆ ಪ್ರವಾಸೋದ್ಯಮದಿಂದ ದೊರಕುವ ಅಪಾರ ಲಾಭಗಳಿಂದಾಗಿ ಅನೇಕ ಅಭಿವರ್ಧಿತ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಹೆಚ್ಚಾಗಿ ಸರಕಾರಗಳ ಪೋಷಣೆ ಪ್ರೋತ್ಸಾಹ ದೊರಕುತ್ತಿದೆ. ಪ್ರವಾಸೋದ್ಯಮದ ಬೆಳವಣಿಗೆಯಿಂದ ಖಾಸಗಿ ವಲಯಕ್ಕೆ ಉತ್ತೇಜನ ದೊರಕುವುದರ ಜೊತೆ ಸರ್ಕಾರದ ಅಡಿಯಲ್ಲೂ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸರಕಾರಗಳ ಪ್ರವಾಸೋದ್ಯಮ ಇಲಾಖೆಗಳು ವಿಸ್ತರಿಸುತ್ತಿವೆ. ಪ್ರವಾಸ ಸಂಬಂಧಿ ಇಲಾಖೆಗಳ ಅಭಿಕರಣಗಳ ಚಟುವಟಿಕೆಗಳು ಹೆಚ್ಚಿವೆ. ಪೌರಸಭೆಗಳು ಹೆಚ್ಚು ವರಮಾನಗಳಿಸುತ್ತಿವೆ. ಸಾಂಸ್ಕøತಿಕ ಸಂಘಗಳ ಕಲಾಪಗಳು ಬೆಳೆಯುತ್ತಿವೆ. ಬ್ಯಾಂಕುಗಳು, ಹಣ ಹೊಟೆ ಸಂಸ್ಥೆಗಳು ಮುಂತಾದ ಎಲ್ಲವೂ ಪ್ರವಾಸೋದ್ಯಮದಿಂದ ಉಪಕೃತವಾಗಿವೆ.

	ಅಧೋರಚನೆ : ಒಂದು ದೇಶದ ಪ್ರವಾಸೋದ್ಯಮದ ಬೆಳೆವಣಿಗೆ ವೈವಿಧ್ಯಮಯವಾದ ನಿಸರ್ಗಸೌಂದರ್ಯ, ಇತಿಹಾಸಪ್ರಸಿದ್ಧ ಹಾಗೂ ಧಾರ್ಮಿಕ ಸ್ಥಳಗಳು ಮುಂತಾದವುಗಳ ಅಸ್ತಿತ್ವದ ಜೊತೆಗೆ ಕೆಲವು ಅಧೋರಚನಾತ್ಮಕ ಸೌಲಭ್ಯಗಳೂ ಕಲ್ಪಿತವಾಗಿರಬೇಕಾದ್ದು ಅತ್ಯವಶ್ಯ. ಮೊಟ್ಟ ಮೊದಲನೆಯದೆಂದರೆ ಸಾರಿಗೆ ವ್ಯವಸ್ಥೆ, ರೈಲ್ವೆ, ರಸ್ತೆ, ವಿಮಾನ ಮಾರ್ಗಗಳು ಅತ್ಯುತ್ತಮವಾಗಿದ್ದಷ್ಟೂ ಸಂಚಾರ ಸೌಲಭ್ಯ ಹೆಚ್ಚಿ ಪ್ರವಾಸಿಗಳು ಹೆಚ್ಚು ಹೆಚ್ಚಾಗಿ ಬರುತ್ತಾರೆ. ವಿದೇಶಿ ಪ್ರವಾಸಿಗಳು ಸಾಮಾನ್ಯವಾಗಿ ಶ್ರೀಮಂತ ದೇಶಗಳವರು, ಅವರ ಪೈಕಿ ವಿಮಾನ ಸೌಲಭ್ಯವನ್ನು ಬಯಸುವವರೆ ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ಇದಕ್ಕೆ ಆಧುನಿಕ ವಿಮಾನ ನಿಲ್ದಾಣಗಳ ನಿರ್ಮಾಣದ ಜೊತೆಗೆ ಅತ್ಯಾಧುನಿಕ ವಿಮಾನಗಳ ಹಾರಾಟ ವ್ಯವಸ್ಥೆಯೂ ಇರಬೇಕಾಗುತ್ತದೆ. ಪ್ರವಾಸಿ ಕೇಂದ್ರಗಳಿಗೆ ಆತ್ಯಂತ ಹತ್ತಿರದ ಸ್ಥಳದವರೆಗೂ ವಿಮಾನಗಳ ಹಾರಾಟದ ಸೌಲಭ್ಯ ಇದ್ದಷ್ಟೂ ಉತ್ತಮ.

	ಉತ್ತಮವಾದ, ನಾನಾ ವರಮಾನ ಮಟ್ಟಗಳ ಪ್ರವಾಸಿಗಳಿಗೆ ತಕ್ಕುದಾದ ವಸತಿಗೃಹಗಳ, ಹೋಟೆಲುಗಳ ನಿರ್ಮಾಣ ಅಗತ್ಯವಾಗುತ್ತದೆ. ಈ ವಸತಿಗೃಹಗಳೂ ಹೋಟೆಲುಗಳೂ ಆಧುನಿಕ ಸೌಲಭ್ಯಗಳನ್ನು ನೀಡುವುದರ ಜೊತೆಗೆ ದೇಶದ ವೈಶಿಷ್ಟ್ಯಗಳೆನಿಸಿದ ಕುಶಲವಸ್ತುಗಳ, ಕಲಾವಸ್ತುಗಳ ಮಾರಾಟಕ್ಕೂ, ಕಲಾಕಾರ್ಯಕ್ರಮಗಳ ನಿರ್ವಹಣೆಗೂ ಅವಕಾಶ ನೀಡುವಂತಿರಬೇಕು. ಪ್ರಪಂಚದ ಅನೇಕ ಉದ್ಯಮ ಸಂಸ್ಥೆಗಳೂ ವೈಜ್ಞಾನಿಕ ಸಾಂಸ್ಕøತಿಕ ಹಾಗೂ ಸಂಶೋಧನ ಸಂಘಗಳೂ ತಮ್ಮ ನಿಯತಕಾಲಿಕ ಸಭೆಗಳನ್ನು ಪ್ರಶಾಂತವಾದ ಪ್ರವಾಸಿಕೇಂದ್ರಗಳಲ್ಲಿ ನಡೆಸುವ ವಾಡಿಕೆಯುಂಟು. ಈ ಕೇಂದ್ರಗಳಲ್ಲಿ ದೊಡ್ಡ ಸಣ್ಣ ರಾಷ್ಟ್ರೀಯ ಅಂತರರಾಷ್ಟ್ರೀಯ ಸಭೆ ಸಮ್ಮೇಳನಗಳನ್ನು ನಡೆಸಲು ತಕ್ಕುವಾದ ಸುಸಜ್ಜಿತ ಭವನಗಳ ನಿರ್ಮಾಣ ಅಗತ್ಯವೆನಿಸುತ್ತವೆ. ಇವುಗಳ ಇರುವಿಕೆಯಿಂದ ಪ್ರವಾಸಿಗಳ ಸಂಖ್ಯೆ ಹೆಚ್ಚುತ್ತದೆ.

	ಮಾರಾಟಗಾರಿಕೆ : ಪ್ರವಾಸಿ ಸ್ಥಳಗಳಲ್ಲಿ ನುರಿತ ಮಾರ್ಗದರ್ಶಿಗಳ ಜೊತೆಗೆ, ದೇಶ ವಿದೇಶಗಳ ಪ್ರವಾಸಿಗಳನ್ನು ಆಕರ್ಷಿಸಲು ಪ್ರಚಾರವೂ ಅತ್ಯವಶ್ಯ. ಇದು ಪ್ರವಾಸೋದ್ಯಮದ ಮಾರಾಟಗಾರಿಕೆ ಎನಿಸಿಕೊಂಡಿದೆ. ಭಾರೀ ಪ್ರವಾಸಿ ಗುಂಪುಗಳನ್ನು ಗುರುತಿಸಿ, ಅವರಿಗೆ ಅನುಕೂಲತಮ ತೃಪ್ತಿನೀಡುವ ಉದ್ದೇಶದಿಂದ ನಾನಾ ಪ್ರವಾಸೋದ್ಯಮ ಸಂಸ್ಥೆಗಳು ಸಂಘಟಿಸಿ ಕಾರ್ಯಪ್ರವೃತ್ತವಾಗುವುದು ಅಗತ್ಯವಾಗುತ್ತದೆ. ಈ ಪ್ರವಾಸೋದ್ಯಮ ಸಂಸ್ಥೆಗಳು ಖಾಸಗಿಯವಿರಬಹುದು, ಸರಕಾರಿಯವಾಗಿರಬಹುದು, ಸ್ಥಳೀಯ ಅಥವಾ ಪ್ರಾದೇಶಿಕ ಇಲ್ಲವೇ ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿರಬಹುದು. ದೇಶದ ವಿವಿಧ ಪ್ರವಾಸಿ ಕೇಂದ್ರಗಳ ವೈಶಿಷ್ಟ್ಯಗಳು, ಅವುಗಳನ್ನು ಸಂದರ್ಶಿಸಲು ಅನುಸರಿಸಬೇಕಾದ ಮಾರ್ಗಗಳು, ಪ್ರವಾಸಿಗಳಿಗೆ ಲಭ್ಯವಿರುವ ಸೌಲಭ್ಯಗಳು ಮುಂತಾದವುಗಳ ಪ್ರಚಾರಕಾರ್ಯ ಅತ್ಯವಶ್ಯವೆನಿಸುತ್ತದೆ. ಇದಕ್ಕಾಗಿಯೂ, ಪ್ರವಾಸ ಕೈಗೊಳ್ಳುವಂತೆ ಜನರ ಮನಸ್ಸಗಳನ್ನು ಪರಿವರ್ತಿಸಿ ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲೂ ಅನ್ಯದೇಶಗಳಲ್ಲಿ ಕೇಂದ್ರಗಳಿರಬೇಕು. ಇದೆಲ್ಲ ಪ್ರವಾಸೋದ್ಯಮದ ಮಾರಾಟಗಾರಿಕೆ ಎನಿಸುತ್ತದೆ.

	ಭಾರತದಲ್ಲಿ : ಭಾರತದಂಥ ವಿಶಾಲ ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯ ಸಾಧ್ಯತೆ ಅಪಾರವಾಗಿದೆ. ನಿಸರ್ಗಸೌಂದರ್ಯ, ಸಸ್ಯ, ಮೃಗಪಕ್ಷಿ ವೈವಿಧ್ಯ, ಐತಿಹಾಸಿಕ ಸ್ಥಳ, ವಿಹಾರಧಾಮಗಳು ಇವೆಲ್ಲವೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗಳನ್ನು ಆಕರ್ಷಿಸಬಲ್ಲವು. ಆದರೆ ಪ್ರವಾಸಿ ಸೌಲಭ್ಯಗಳು ಸಾಕಷ್ಟು ಇಲ್ಲದ್ದರಿಂದ ಪ್ರವಾಸೋದ್ಯಮ ಬೆಳೆಯಬೇಕಾದಷ್ಟು ಬೆಳೆದಿಲ್ಲ. ಪ್ರಪಂಚದ ಪ್ರವಾಸೋದ್ಯಮದಲ್ಲಿ ಭಾರತದ ಪಾಲು ಸುಮಾರು 0.30ರಷ್ಟು ಮಾತ್ರ.

	1980ರ ದಶಕದ ಅಂತ್ಯದವೇಳೆಗೆ ವಾರ್ಷಿಕವಾಗಿ 35 ಲಕ್ಷ ವಿದೇಶಿ ಪ್ರವಾಸಿಗಳನ್ನು ಆಕರ್ಷಿಸಲು ಭಾರತ ಸರ್ಕಾರ 10 ವರ್ಷಗಳ ಯೋಜನೆಯೊಂದನ್ನು ರೂಪಿಸಿದೆ.
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ